ಕೈ ಕುಯ್ದುಕೊಂಡು
ಎದೆ ಮೇಲೆ ಹಚ್ಚೆ ಹಾಕಿಸಿಕೊಂಡು
ಉಡಾಳ ಗೆಳೆಯ ನ ಗಾಡಿ
ತಗೊಂಡು
ನೀ ಬರೋ ಹಾದೀಲಿ
ಅಡ್ಡಡ್ಡ ಹಾಕಿ ಐ ಲವ್ ಯೂ
ಅಂತ ಹೇಳೋ ಪಾಲ್ತು
ಹುಡುಗ ನಾನಲ್ಲ!
ಅಷ್ಟಕ್ಕೂ ಹಾಂಗ ಹೇಳೋ
ಧೈರ್ಯ ನೇ ನನಗಿಲ್ಲ. ಅಸಲಿಗೆ ಕಾಲೇಜ್ ತುಂಬಾ ಸೈಲೆಂಟ್ ಹುಡುಗ ಅನಿಸಿಕೊಂಡು ಲೆಕ್ಚರರ್ ಗಳಿಗೆಲ್ಲ ವಿಧೇಯ ವಿದ್ಯಾರ್ಥಿ ಎನಿಸಿಕೊಂಡು ಇರೋಬರೋ ಇಂಟರ್ನಲ್ಸ್ ಎಲ್ಲಾ ನನ್ನ ಹೆಸರಿಗೆ ಬರೆಯಿಸಿಕೊಳ್ಳುವ ಬಂಗಾರದಂತ ಹುಡುಗ ನಾನು.
ಬೇಕಂದ್ರ "ಕಾರ್ಗತ್ತಲ ಅಮವಾಸ್ಯೆ ದಿನ ಚಂದ್ರ ನ ಕಲ್ಪಿಸಿಕೊಂಡು ಅಂಗಳದೊಳಗೆ ಬೆಳದಿಂಗಳ ಬರಮಾಡಿಕೊಂಡು ಬೆಣ್ಣೆಯಂಥ ಸುಂದರಿ ಯನ್ನು ಮನಸ್ಸಿನ ಮಂದಿರದಲ್ಲಿ ಮೂಡಿಸಿಕೊಂಡು ಚಂದದ ಕವನ ಬರೆದುಬಿಟ್ಟೇನು! "
ಮೊನ್ನೆ ಕಾಲೇಜ್ functionಲ್ಲಿ ಸ್ವರಚಿತ ಕವನ ಸ್ಪರ್ಧೆಯಲ್ಲಿ ನಾ ವಾಚಿಸಿದ ಕವನ "ಮರೆತೆನೆಂದರೆ ಮರೆಯಲಿ ಹೆಂಗ, ಸಜ್ಜನ ಸೃಜನಿ ಸಾಜನಿ ಸಂಗ" ಅಂತ, ಅದು ಸುಮ್ನೆ ನಿನ್ನ ಕುರಿತೇ ಬರೆದದ್ದು.
ಅವತ್ತು ಯೂನಿಫಾರಂ ಧರಿಸದೇ ಕಾಲೇಜ್ ಗೆ ಬಂದಾಗ ಸರ್ ನಿನ್ನನ್ನು ಹೊರಗಡೆ ನಿಲ್ಲಿಸಿದ್ದರು. ನಾನು ಕಿಡಕಿಯಿಂದ ನಿನ್ನ ನೋಡಿ ನಕ್ಕಿದ್ದೇ ಬಂತು.
ನಾ ಎಷ್ಟು ವಿಧೇಯ ವಿದ್ಯಾರ್ಥಿ ಅಂತ ನನ್ನ ಮೇಲೆ ನನಗೆ ಅಭಿಮಾನ ಬಂದಿತ್ತು.
ಆದ್ರ ಸರ್ ಮೇಲೆ ನನಗೆ ಸಿಟ್ಟು ಬಂದಿತ್ತು ನೋಡು ನಿನ್ನ ಹೊರಗೆ ನಿಲ್ಲಿಸಿದ್ದಕ್ಕೆ.
ಮೊದಲೆಲ್ಲ ಸರ್ ಮೇಲೆ ವಿಪರೀತ ಅಭಿಮಾನ ಇರುತ್ತಿತ್ತು. ಅವರನ್ನು ಕಣ್ಮನಗಳೆರಡೂ follow ಮಾಡುತ್ತಿದ್ಧವು. ನಮಗೆ ಅವರೇ ಹೀರೋ ಆಗಿದ್ದರು. ಈಗಂತೂ ಕೆಲವು ಸರ್ ಗಳು ವಿಲನ್ ಆಗ್ಯಾರ ನೋಡು. ಅಷ್ಟೆಲ್ಲ ಸರ್ ಗಳೊಳಗ ಒಬ್ಬರೇ ನನಗೆ ಹೀರೋ ತರ ಕಾಣಿಸ್ತಾರೆ ನೋಡು. ಒಂದೊಂದು ಸಾರಿ ಅವರೂ ಕೂಡ ಪಂಚ್ ಕೊಡ್ತಾರೆ. ಆ ಪಂಚ್ ತಡೆದುಕೊಳ್ಳಾಕ ಮೀಟರ್ ಬೇಕು. ನಾನು ಹೀರೋ ಆದರೂ ಆ ಸರ್ ನನಗೆ ಹೀರೋ .
ನನ್ನ ಬೆಂಚ್ ನ ಮುಂದೆ ನೀ ಹಾಯ್ದು ಹೋದಾಗ ನನ್ನ ಜೀವ ಬಾಯಿಗೆ ಬಂದಂಗ ಆಗ್ತಿತ್ತು! ಹಸಿರಂಚಿನ ಗರಿ ಗರಿ ಲಂಗ ಬೀಸಿ ತಂದ ಗಾಳಿ ನನ್ನೆದೆಗೆ ಆಮ್ಲಜನಕ ಕೊಟ್ಟಂಗಾಗಿತ್ತು. ಯವ್ವಿ ಯವ್ವಿ ಯವ್ವಿ! ಅಷ್ಟು ಸಾಕಾಗಿತ್ತು ಈ ಜೀವಕ್ಕೆ!
ನಿನಗೆ ಗೊತ್ತೆ? ಮೊನ್ನೆ ದೀಪಾವಳಿ ಹಬ್ಬಕ್ಕೆ ಮನೆ ಸ್ವಚ್ಛ ಮಾಡುವಾಗ ಹಳೆ ಪೇಪರ್ ಎಲ್ಲ ಗುಡಿಸುತ್ತಿದ್ದೆ. ಒಂದು ಮಡಿಚಿದ ಪೇಪರ್ ಕಣ್ಣಿಗೆ ಬಿತ್ತು. ತೆಗೆದು ನೋಡಿದೆ. ಉಪ್ಪಿನ ಕಾಯಿ ಭರಣಿ ತೆಗೆದಾಗ ಬರುವ ಘಮಲು ಮೂಗಿಗೆ ಬಂತು. ಕನ್ನಡ ಶಾಲೆ ಗೆ ಹೋಗುವಾಗ
" ನೀನೊಂದು ಮನೆ ನಾನೊಂದು ಮನೆ ನಮ್ಮಿಬ್ಬರ ಮನೆ ಮೈಸೂರು ಅರಮನೆ" ಎಂದು ಬರೆದದ್ದು ನೋಡಿ ನಗು ಬಂತು. ಎಂಥಾ ಎಳೆ ಮಾವಿನ ಚಿಗುರಿನಂಥ ಪ್ರೇಮ??! ಅರಸ ಯಾರು ಅರಸಿ ಯಾರು? ಎಂದೇ ಅರಿಯದ ಕನಸಲೂ ಅರಿಯದ ಅರಮನೆಯನ್ನು ಕಲ್ಪಿಸುವ ಬಾಲ್ಯ ಪ್ರೇಮ!!
ಮುಂದಿನ ವಾರ ಸೆಮಿಸ್ಟರ್ ಪರೀಕ್ಷೆ ಶುರುವಾದವು. ನಿನ್ನ ನೆನಪಿಸಿಕೊಂಡು ಕೂತರೆ " ಹಿಂದಿನದು ನೆನೆಸಿಕೊಂಡು ಹಿತ್ತಲದೊಳಗೆ ಅತ್ತಂಗ" .
ನಿನಗೆ ಗೊತ್ತೇನು ಸೆಮಿಸ್ಟರ್ ರಿಸಲ್ಟ ಬಂದಾಗ ಗೆಳೆಯರು ತಮ್ಮ ರಿಸಲ್ಟ್ ನೋಡುವದಕ್ಕಿಂತ ಮೊದಲು ನನ್ನ ರಿಸಲ್ಟ್ ನೋಡ್ತಾರೆ. Time ಆಯ್ತು ಇವತ್ತಿನ target reach ಆಗಿಲ್ಲ ಇನ್ನು. ಮುಂದಿನ ವಾರ ಪರೀಕ್ಷೆದಾಗ ಸಿಗೋನಲ್ಲ!!!?!.
No comments:
Post a Comment